Thursday, November 1, 2018

ಕನ್ನಡ ರಾಜ್ಯೋತ್ಸವ

1956 ನವೆಂಬರ್ 1 ಕನ್ನಡಿಗರೆಲ್ಲರು ನೆನೆಯಬೇಕಾದ ದಿನ. ಕನ್ನಡ ನಾಡು ವಿವಿಧ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದವು. ಅವೆಲ್ಲವೂ ಮೈಸೂರು ರಾಜ್ಯಕ್ಕೆ ಸೇರಿ ಕರ್ನಾಟಕ ವೀಶಾಲವೆನಿಸಿದ ದಿನವೇ ನವೆಂಬರ್ ಒಂದು. ಅಂದಿನಿಂದ ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲನೆಯ ದಿನ ಕನ್ನಡ ರಾಜ್ಯೋತ್ಸವ ಎಂದು ಕೊಂಡಾಲಾಗುತ್ತಿದೆ.


1956ರ ನವೆಂಬರ್ ಒಂದರಂದು ನವ ಮೈಸೂರು ಎಂದು ಹೆಸರಿಸಲಾದ ರಾಜ್ಯಕ್ಕೆ 1973ರ ಅದೇ ದಿನ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.


ಹೊಸದಾಗಿ ರಚನೆಯಾದ ರಾಜ್ಯ ಈ ಕೆಳಕಂಡ ಪ್ರಾಂತ್ಯಗಳನ್ನು ಒಳಗೊಂಡಿತ್ತು.

  • ಹಿಂದಿನ ಮೈಸೂರು ಪ್ರಾಂತ್ಯ ಮತ್ತು ಬಳ್ಳಾರಿ ಜಿಲ್ಲೆ.
  • ಹಿಂದಿನ ಬೊಂಬಾಯಿ ರಾಜ್ಯಕ್ಕೆ ಸೇರಿದ ಬೆಳಗಾವಿ, ಬಿಜಾಪುರ, ಧಾರಾವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು.
  • ಹಿಂದಿನ ಹೈದರಾಬಾದ್ ಪ್ರಾಂತ್ಯದ ಗುಲ್ಬರ್ಗಾ , ರಾಯಚೂರು ಮತ್ತು ಬೀದರ್ ಜಿಲ್ಲೆಗಳು.
  • ಹಿಂದಿನ ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಳ್ಳೆಗಾಲ ತಾಲ್ಲೂಕು  ಹಾಗೂ ಕೊಡಗು .


karnataka


ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ ಇಂದು 30 ಜಿಲ್ಲೆಗಳನ್ನು 227 ತಾಲೂಕ್ಕೂಗಳನ್ನು ಒಳಗೊಂಡಿರುವ ಸುಂದರ ಪ್ರದೇಶವಾಗಿದೆ.


ಬೇರೆಬೇರೆ ಆಡಳಿತಕ್ಕೆ ಸೇರಿಹೋಗಿದ್ದ ಕನ್ನಡಿಗರ ಸ್ಥಿತಿ ತುಂಬಾ ಶೋಚನೀಯವಾಗಿತ್ತು.ಆಯಾ ಪ್ರಾಂತ್ಯಗಳ ಭಾಷೆ ಕಲಿಯಬೇಕಾಗಿದ್ದೀತು.ತಮೀಳೋ, ತೆಲುಗೋ ಇಲ್ಲವೆ ಮರಾಠಿಯನ್ನು ಕಲಿಯಬೇಕಾಗಿ ಬಂದದ್ದು ದುಸ್ಥಿತಿಯೇ ಸರಿ. ಮೇಲಾಗಿ ಕನ್ನಡ ಪ್ರದೇಶಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿಯಷ್ಟೇ ಅಲ್ಲದೆ ಔದ್ಯಮಿಕವಾಗಿ ಪ್ರಗತಿ ಕಾಣದೆ ಹಿಂದುಳಿದಿದ್ದವು.  ಇನ್ನು ಆಯಾ ಪ್ರಾಂತ್ಯಗಳಲ್ಲಿನ ಶಾಸನ ಸಭೆಗಳಲ್ಲಿ ಕನ್ನಡಿಗರಿಗೆ ಪ್ರಾತಿನಿದ್ಯವೇ ಇರದಂತಾಯಿತು.
ಕನ್ನಡಿಗರ ಶೋಷಣೆಯೂ ಆಗಿತ್ತು. ಇವೆಲ್ಲಾ ಕನ್ನಡ ನಾಡಿನ ಏಕಿಕರಣಕ್ಕೆ ಪ್ರಚೋದಿಸಿದವು.


ಇದಕ್ಕೆ ಒಂದು ಚಳುವಳಿಯೇ ನಡೆಯಿತು. 1856 ರಷ್ಠು ಹಿಂದೆಯೇ ಏಕೀಕರಣ ಚಳುವಳಿಯ ಸ್ವರೂಪ ಮೂಡಿತ್ತು. ಧಾರವಡದಲ್ಲಿ  1890ರ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ 1916ರ ಕರ್ನಾಟಕ ಸಭಾ ಮತ್ತು ಬೆಂಗಳೂರಿನಲ್ಲಿ 1915 ರ ಕನ್ನಡ ಸಾಹಿತ್ಯ ಪರಿಷತ್ತು ಇವುಗಳು ಸ್ಥಾಪನೆಗೊಂಡ ಬಳಿಕ ಈ ಚಳುವಳಿಗೆ ಚಾಲನೆ ದೊರಕಿತು. ಸಾಹಿತ್ಯ ಪರಿಷತ್ತು ಪ್ರತಿ ವರ್ಷ ವ್ಯವಸ್ಥೆ ಮಾಡುತಿದ್ದ ಸಮ್ಮೇಳನಗಳಲ್ಲಿ ಏಕೀಕರಣವಾಗಬೇಕೆಂಬ ಒತ್ತಾಯ ಬರುತ್ತಿತ್ತು.


ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ಸ್ ಸಮಿತಿ ರಚನೆಯಾಗಿ ಅಖಿಲ ಕರ್ನಾಟಕ ವ್ಯಾಪ್ತಿಯ ಸಮ್ಮೇಳನಗಳೂ ಜರುಗಿ ಏಕೀಕರಣದ ಕಹಳೆ ಎಲ್ಲೆಲ್ಲೂ ಮೂಡತೊಡಗಿತು. ಕನ್ನಡ ಸಾಹಿತಿಗಳು, ರಾಜಕಾರಣಿಗಳು, ಪತ್ರಿಕೆಗಳು ಏಕೀಕರಣಕ್ಕಾಗಿ ದುಡಿದ ರೀತಿ ಗಮನಾರ್ಹವಾದದ್ದು. ಬೆಳಗಾವಿಯಲ್ಲಿ 1924ರ ಕಾಂಗ್ರೆಸ್ಸ್ ಅಧಿವೇಶನ ಕಾಲದಲ್ಲಿಯೇ ಕರ್ನಾಟಕ ಸಮ್ಮೇಳನವು ಜರುಗಿತು. ಕಾಂಗ್ರೆಸ್ಸ್ ಅಧಿವೇಶನ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದದ್ದು ವಿಶೇಷ. 1946ರ,10ನೇ ಏಕೀಕರಣ ಸಮ್ಮೇಳನವು ಬೊಂಬಾಯಿಯಲ್ಲಿ ಸೇರಿ ಆ ಸಮ್ಮೇಳನವನ್ನು ಸರ್ದಾರ್ ವಲ್ಲಭಬಾಯಿ ಪಟೇಲರು ಉದ್ಘಾಟಿಸಿ ದೇಶ ಭಾಷಾ ಪ್ರದೇಶಗಳ ಮೇಲೆ ಬ್ರಿಟೀಷ್ ಸರ್ಕಾರ ಹೇರಿದ್ದ ವಿಭಜನೆಯ ಆತಂಕಗಳನ್ನು ನಿವಾರಿಸುವ ಕೆಲಸ ಕುರಿತು ಪ್ರಸ್ತಾಪಿಸಿದರು.



ಭಾರತ ಸ್ವಾತಂತ್ರ್ಯ ನಂತರ ಕರ್ನಾಟಕಕ್ಕಾಗಿ ಹಲವು ಪ್ರಯತ್ನಗಳನ್ನು ನಡೆಸಲಾಯಿತು. ಸರ್ಕಾರ ನೇಮಿಸಿದ್ದ ಧಾರ್ ಸಮಿತಿಯು ಭಾಷಾವಾರು ಪ್ರಾಂತ್ಯಗಳ ರಚನೆಗೆ ವಿರೋಧ ವ್ಯಕ್ತಪಡಿಸಿತು. ಅಲ್ಲದೆ ಭಾರತ ಕಾಂಗ್ರೆಸ್ಸ್ ನೇಮಿಸಿದ್ದ ಪ್ರಾಂತ್ಯ ರಚನಾ ಸಮಿತಿ ಆಂಧ್ರ ಪ್ರಾಂತ್ಯ ರಚನೆಗೆ ಒಪ್ಪಿತೇ ವಿನಹ ಕರ್ನಾಟಕ ಪ್ರಾಂತ್ಯ ರಚನಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ . ಆಗ ಆಂಧ್ರದಲ್ಲಿ ನಡೆದ ಉಗ್ರವೂ ಹಿಂಸಾತ್ಮಕವೂ ಆದ ಚಳುವಳಿ ಆಂಧ್ರ ಪ್ರದೇಶ ರಚನೆಗೆ ಸರ್ಕಾರ ಮುಂದುವರಿವುಯುವಂತೆ ಮಾಡಿತು. ಆಗಷ್ಟೇ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರು ರಾಜ್ಯಕ್ಕೆ ಸೇರಿದವು. ಅಂದರೆ ಆಗ ಮೈಸೂರು ರಾಜ್ಯಕ್ಕೆ ಸೇರಿದವು . ಅಂದರೆ ಆಗ ಮೈಸೂರು ರಾಜ್ಯದಲ್ಲಿ ಒಟ್ಟು ಹತ್ತು ಜಿಲ್ಲೆಗಳಾದವು. ಕೇವಲ ಆಂಧ್ರ ಪ್ರದೇಶದ ರಚನೆಯಾಯಿತೇ ಹೊರತು ಉಳಿದ ಯಾವ ಭಾಷಾ ಪ್ರಾಂತ್ಯವನ್ನೂ ರಚಿಸಲಾಗಲಿಲ್ಲ. ಇದನ್ನು ಅಂದಿನ ಮೈಸೂರು ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ತೀವ್ರವಾಗಿ ವಿರೋಧಿಸಿದರು. ಎಲ್ಲೆಲ್ಲೂ ಚಳುವಳಿ ಆರಂಭವಾಗಿ ಮೆರವಣಿಗೆ, ಪ್ರತಿಭಟನೆಗಳು ನಡೆದು ಕೇಂದ್ರ ಸರ್ಕಾರ ಕನ್ನಡಿಗರ ಅಭಿಪ್ರಾಯವನ್ನು ಸ್ವಾಗತಿಸಿ ಪ್ರಾಂತ್ಯ ರಚನೆಗೆಂದು ಒಂದು ಸಮಿತಿ ರಚಿಸಿತು. ಫಜಲ್ ಅಲಿ ಸಮಿತಿ ಎಂಬೀ ಸಮಿತಿ ೧೯೫೫ ರಲ್ಲಿ ತನ್ನ ವರದಿ ಸಲ್ಲಿಸಿತು. ಲೋಕ ಸಭೆಯಲ್ಲಿ ರಾಜ್ಯ ಪುನರ್ವಿಂಗಡಣ ಕಾಯಿದೆ ಅಂಗೀಕಾರವಾಗಿ ಮೈಸೂರು ರಾಜ್ಯವು ತನಗೆ ಬರಬೇಕಾದ ಭಾಗಗಳನ್ನುಒಳಗೊಂಡು ವಿಶಾಲ ಮೈಸೂರು ರಾಜ್ಯದ ಉದಯವಾಯಿತು. ಇದು ಈಡೇರಿದ ದಿನವೇ 1956ರ ನವೆಂಬರ್  ಒಂದು.


ಏಕೀಕರಣವಾದ ಮೇಲೆ ಕರ್ನಾಟಕವು ಪ್ರಗತಿಪಥದಲ್ಲಿ ನಡೆಯುವಂತಾಗಿ ನೀರಾವರಿ, ವಿದ್ಯುಚ್ಛಕ್ತಿ , ಕೈಗಾರಿಕೆ, ಶಿಕ್ಷಣ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ . ಕರ್ನಾಟಕದಲ್ಲಿರುವ ಸಂಪನ್ಮೂಲಗಳು ವಿಭಿನ್ನ ಬಗೆಯವಾಗಿದ್ದು ಕರ್ನಾಟಕ ಚಿನ್ನದ ನಾಡು, ಗಂಧದ ಬೀಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಏಕೀಕೃತ ಕರ್ನಾಟಕದ ವಿಸ್ತೀರ್ಣ 1,91,733 ಚದರ ಕಿ.ಮೀ. ಜಯಚಾಮರಾಜ ಒಡೆಯರ್ ಅವರು ವಿಶಾಲ ಕರ್ನಾಟಕದ ಪ್ರಥಮ ರಾಜ್ಯಪಾಲರಾದರು.


ಕರ್ನಾಟಕವನ್ನು ಕದಂಬರು, ಗಂಗರು, ಚಾಳುಕ್ಯರು, ರಾಷ್ಟ್ರಕೂಟರು, ಯಾದವರು, ಬಲ್ಲಾಳರು, ವಿಜಯನಗರ ವೀರರು ಆಳಿದ್ದಾರೆ. ಕೃಷ್ಣದೇವರಾಯ ವಿಜಯನಗರದ ಅರಸರ ಪೈಕಿ ಶ್ರೇಷ್ಠ ದೊರೆ ಎನಿಸಿದ್ದವರು, ಇವ ಆಳ್ವಿಕೆಯಲ್ಲಿ ಕರ್ನಾಟಕ ಅತ್ಯುನತ ಶ್ರೀಮಂತ ನಾಡೆನಿಸಿತ್ತು.


ಕರ್ನಾಟಕ ಕವಿಗಳ ಬೀಡು. ಪಂಪ, ರನ್ನ,ಜನ್ನ,ಪೊನ್ನ,ಕುಮಾರವ್ಯಾಸರೇ ಮೊದಲ್ಗೊಂಡು ಕುವೆಂಪು, ಬೇಂದ್ರೆ, ರಾಜರತ್ನಮ್, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ವಿ. ಕೃ. ಗೋಕಾವರೆಗೆ ಹಲವಾರು ಕವಿಗಳು, ಸಾಹಿತಿಗಳು ಏರುವ ಕನ್ನಡ ನಾಡು ಸಾಹಿತ್ಯ ಸಿರಿಯನ್ನುಳ್ಳದ್ದಾಗಿದೆ. ಕ್ರಿ.ಷ. ಒಂಬತ್ತನೇ ಶತಮಾನದಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ವಿಸ್ತರಿಸಿತ್ತು ಎಂದು ನೃಪತಂಗ ತನ್ನ 'ಕವಿರಾಜ ಮಾರ್ಗ' ದಲ್ಲಿ ಹೇಳಿದ್ದಾನೆ. ಕನ್ನಡದ ಏಕೀಕರಣಕ್ಕಾಗಿ ಹಲವಾರು ಮಹನೀಯರು ದುಡಿದರು. ಹುಯಿಲಗೋಳ ನಾರಾಯಣರಾಯರು 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂದು ಹಾಡಿ ಕನ್ನಡಿಗರಿಗೆ ಸ್ಪೂರ್ತಿ ತುಂಬಿದರು. ಮಂಗಳವೇಡೆ ಶ್ರೀನಿವಾಸರಾಯರು, ಡೆಪ್ಯುಟಿ ಚೆನ್ನಬಸಪ್ಪ, ಸರ್ ಮ್. ವಿಶ್ವೇಶ್ವರಯ್ಯ, ಎಸ್. ನಿಜಲಿಂಗಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆ.ನ. ಕೃಷ್ಣರಾಯ ಮೊಲಾದ ಅನೇಕ ಸಾಹಿತಿಗಳು, ರಾಜಕಾರಣಿಗಳು ಕನ್ನಡ ನಾಡಿಗಾಗಿ ಶ್ರಮಿಸಿದ್ದರು.

kannada-manasa
kannada-manasa

















ಕನ್ನಡ ರಾಜ್ಯೋತ್ಸವದಂದು ಕನ್ನಡಪರ ಕಾರ್ಯಕ್ರಮಗಳು ನಡೆಯುವುದಲ್ಲದೆ ಇಡೀ ತಿಂಗಳು ನಾಡಿನಾದ್ಯಂತ ರಾಜ್ಯೋತ್ಸವದ ನೆನೆಪಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ಕನ್ನಡಿಗರು ನಾಡಿನ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಬೇಕು.


ಕನ್ನಡ ರಾಜ್ಯದಲ್ಲಿ ಕನ್ನಡಕ್ಕೆ ಮನ್ನಣೆ ಎಲ್ಲ ಹಂತಗಳಲ್ಲೂ ದೊರಕುವಂತಾಗಬೇಕು. ಕನ್ನಡಿಗರಿಗೆ ಉದ್ಯೋಗ, ಕನ್ನಡ ಪತ್ರಿಕೆಗಳಿಗೆ, ಚಲನಚಿತ್ರಗಳಿಗೆ ಪ್ರೋತ್ಸಾಹ ಇವು ವ್ಯಾಪಕವಾಗಿ ದೊರಕಬೇಕು. ಕೇವಲ ಘೋಷಣೆ, ಸನ್ಮಾನ ಸಭೆಗಳಿಂದ ಎಲ್ಲವೂ ಕೈಗೂಡಿಬಿಡುವುದಿಲ್ಲ. ಕೃತಿರೂಪಕ್ಕಿಳಿದಾಗಲೇ ನಮ್ಮತನ ಪ್ರದರ್ಶಿಸಲು ಸಾಧ್ಯಾವಾಗುತ್ತದೆ.


ಕನ್ನಡ ರಾಜ್ಯೋತ್ಸವ ಕನ್ನಡ ನಾಡಿನ ಏಳಿಗೆ, ಕನ್ನಡ ಪರ ಸಂಘಟನೆ, ಭಾಷಾ-ಒಲವು ಇವುಗಳಿಗೆ ಪ್ರೇರಕವಾಗಬೇಕು. ಕರ್ನಾಟಕ ಹಲವಾರು ಪ್ರವಾಸಿ ಆಕರ್ಷಣ ಕೇಂದ್ರಗಳನ್ನೊಳಗೊಂಡಿದೆ. ಇವುಗಳು ಐತಿಹಾಸಿಕವಾಗಿಯೂ ಸಾಂಸ್ಕೃತಿಕವಾಗಿಯೂ ಮಹತ್ವ ಉಳ್ಳದ್ದಾಗಿದೆ. ಇವುಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಇವು ಪೂರಕ. ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ, ಸೋಮನಾಥಪುರ, ಐಹೊಳೆ, ಪಟ್ಟದಕಲ್ಲು, ಬಿಜಾಪುರ ಇವು ಪ್ರವಾಸಿ ತಾಣಗಳಾಗಿವೆ.


ಕರ್ನಾಟಕದಲ್ಲಿ ಹದಿನೈದಕ್ಕೂ ಹೆಚ್ಚು ವಿದ್ಯಾಸಂಸ್ಥೆ, ವಿದ್ಯುದ್ಗಾರ ಕೇಂದ್ರಗಳು, ಕೇಂದ್ರ ಹಾಗು ರಾಜ್ಯ ಸರ್ಕಾರದ ಉದ್ದಿಮೆಗಳು, ನದಿ ಸರೋವರಗಳೂ, ಕಡಲ ಧಾಮಗಳೂ, ವನ್ಯ ಮೃಗಧಾಮಗಳು, ಗಣಿಗಳು ಇವೆಲ್ಲ ದ್ದು ನಾಡು ಸಂಪದ್ಭರಿತವಾಗಿದೆ. ಈ ಎಲ್ಲ ಸಂಪತ್ತನ್ನು ಉತ್ಪಾದನೆಗೆ ಬಳಸಿಕೊಳ್ಳುವಲ್ಲಿ ಜಾಣ್ಮೆಯು ತೋರಬೇಕಾಗಿದೆ.   


ಭಾರತೀಯ ಜ್ಞಾನಪೀಠ ಪ್ರಶಸ್ತಿ ಆರು ಬಾರಿ ಕನ್ನಡಕ್ಕೆ ದೊರೆತಿದೆ. ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು, ಸಾಹಿತಿಗಳು, ವಿಜ್ಞಾನಿಗಳು , ಶಿಕ್ಷಕರು, ಕ್ರೀಡಾಪಟಗಳು ಹೆಮ್ಮೆಯ
ಕನ್ನಡಿಗರು . ನಾಡು, ನುಡಿ ಸಂಸ್ಕೃತಿಗಳ ಪ್ರವರ್ಧನೆಗೆ ಶ್ರಮಿಸುತ್ತಿರುವ ನೂರಾರು ಸಾವಿರಾರು ಕಲಾವಿದರು, ಕವಿಗಳು ಕರ್ನಾಟಕದಲ್ಲಿರುತ್ತಾರೆ, ಇವರನ್ನು ಗುರುತಿಸುವ ಕೆಲಸವಾಗಬೇಕು. ಸನ್ಮಾನ, ಪ್ರೋತ್ಸಹ ಇವು ಪೂರಕವಾಗಿ ನಾಡಿನ ಏಳಿಗೆಗೆ ಅವಕಾಶ ಒದಗಬೇಕು.  ಕನ್ನಡಕ್ಕಾಗಿ ದುಡಿಯುವ ಮನೋಭಾವ ಬೆಳೆಯದೆ ರಾಜ್ಯೋತ್ಸವದ ಉದ್ದೇಶ ಪೂರೈಕೆಯಾಗುವುದಿಲ್ಲ. ಎಲ್ಲ ಕನ್ನಡಿಗರೂ ಕನ್ನಡ ಭಾಷೆಗೆ ಸಿಕ್ಕಬೇಕಾದ ಗೌರವವನ್ನು ದೊರಕಿಸುವಲ್ಲಿ ಹಾಗೂ ಕನ್ನಡ ನಾಡನ್ನು ಹೆಚ್ಚಿನ ಪ್ರಗತಿ ಪಥದಲ್ಲಿ ಸಾಗಿಸುವಲ್ಲಿ ಶ್ರಮವಹಿಸಿ ದುಡಿದಾಗ ನಾಡು ಮೈ ತುಂಬಿಕೊಂಡು ಕಂಗೊಳಿಸುತ್ತದೆ . ತಾಯಿ ಭುವನೇಶ್ವರಿ ನಲಿಯುವಂತಾಗುತ್ತದೆ. ರಾಜ್ಯೋತ್ಸವ ಈ ಕೆಲಸಕ್ಕೆ ಪ್ರೇರಕವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು.




                       "ಜೈ ಕನ್ನಡ , ಜೈ ಕರ್ನಾಟಕ ಮಾತೆ, ಜೈ ಹಿಂದ್ "

ಕನ್ನಡ ರಾಜ್ಯೋತ್ಸವ

1956 ನವೆಂಬರ್ 1 ಕನ್ನಡಿಗರೆಲ್ಲರು ನೆನೆಯಬೇಕಾದ ದಿನ. ಕನ್ನಡ ನಾಡು  ವಿವಿಧ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದವು. ಅವೆಲ್ಲವೂ ಮೈಸೂರು ರಾಜ್ಯಕ್ಕೆ ಸೇರಿ ಕರ್ನಾಟಕ ವೀಶಾ...